ತಿರುವಾಂಕೂರು
ದಕ್ಷಿಣ ಭಾರತದಲ್ಲಿದ್ದ ಒಂದು ದೇಶಿಯ ಸಂಸ್ಥಾನ.  1949ರ ಜುಲೈ 1 ರಂದು ಕೊಚ್ಚಿಯೊಂದಿಗೆ ಸೇರಿ ತಿರುವಾಂಕೂರು ಕೊಚ್ಚಿ ರಾಜ್ಯವಾಯಿತು.  ಈಗ ಕೇರಳ ರಾಜ್ಯದ ಭಾಗವಾಗಿದೆ.  ಮಲಯಾಳಂ ಭಾಷೆಯಲ್ಲಿ ತಿರುವಿತ್ತಂಕೂರ್ ಎಂದೂ ಸಂಸ್ಕøತದಲ್ಲಿ ಶ್ರೀವರ್ಧನಪುರಿ ಎಂದೂ ಇದರ ಹೆಸರು.  ಅರಬ್ಬಿ ಸಮುದ್ರದ ಅಂಚಿನಲ್ಲಿ ಉತ್ತರ-ದಕ್ಷಿಣವಾಗಿ 150 ಮೈ. (240 ಕಿಮೀ.)  ಉದ್ದಕ್ಕೆ ಕನ್ಯಾಕುಮಾರಿಯವರೆಗೂ ಹಬ್ಬಿದ್ದ ತಿರುವಾಂಕೂರು ಸಂಸ್ಥಾನದ ಪಶ್ಚಿಮ ಮತ್ತು ದಕ್ಷಿಣದಲ್ಲಿ ಅರಬ್ಬಿ ಸಮುದ್ರ, ಉತ್ತರದಲ್ಲಿ ಕೊಚ್ಚಿ ಸಂಸ್ಥಾನ ಮತ್ತು ಮದ್ರಾಸದ ಪ್ರಾಂತ್ಯದ (ತಮಿಳುನಾಡು) ಕೊಯಮತ್ತೂರು, ಪೂರ್ವದಲ್ಲಿ ಮದುರೈ, ರಾಮನಾಡ್ ಮತ್ತು ತಿರುನೆಲ್ವೇಲಿ ಜಿಲ್ಲೆಗಳು ಸುತ್ತು ವರಿದಿದ್ದ ತಿರುವಾಂಕೂರು ದಕ್ಷಿಣ ಕಾಶ್ಮೀರ ಎಂದು ಪ್ರಸಿದ್ಧವಾಗಿತ್ತು. ಎತ್ತರವಾಗಿರುವ ಪರ್ವತ ಪ್ರದೇಶ, ಬಹು ದೂರದವರೆಗೆ ಹಸಿರುಗಂಬಳಿ ಹಾಸಿದಂತೆ ಬತ್ತದ ಬಯಲು, ನದಿ, ನಾಲೆ, ಸರೋವರ, ಸಮುದ್ರ, ಖನಿಜ ಸಂಪತ್ತು, ಅಪೂರ್ವ ಪ್ರಾಣಿ ಹಾಗೂ ಸಸ್ಯವರ್ಗ, ತೆಂಗಿನ ಮರಗಳು ಮುಂತಾದುವುಗಳಿಂದ ವಿಶಿಷ್ಟವಾದ ಸಂಸ್ಥಾನವಾಗಿತ್ತು.  ಇಲ್ಲಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯನ್ನೂ ಹಲವು ವಿಶಿಷ್ಟ ಪುರಾತನ ಸಂಪ್ರದಾಯಗಳನ್ನೂ ಉಳಿಸಿಕೊಂಡು ಅವುಗಳೊಡನೆ ಆಧುನಿಕ ರೂಢಿಗಳನ್ನೂ ಸಂಯೋಜಿಸಿಕೊಂಡು ಬೆಳೆದ ಒಂದು ಪ್ರಗತಿಪರ ಸಮುದಾಯವನ್ನು ಕಾಣಬಹುದು.

ತಿರುವಾಂಕೂರಿನ ದೊರೆಗಳು ಪಾಂಡ್ಯ ಹಾಗೂ ಚೋಳರೊಡನೆ ಸರಿಸಮವಾಗಿ ದಕ್ಷಿಣ ಭಾರತವನ್ನು ಆಳಿದ ಚೇರ ಪ್ರಭುಗಳನ್ನು ತಮ್ಮ ಮೂಲಪುರುಷರೆಂಬುದಾಗಿ ಹೇಳಿಕೊಳ್ಳುತ್ತಿದ್ದರು.  ಕಾಲಕ್ರಮೇಣ ಚೇರರ ಪ್ರಾಬಲ್ಯ ಕುಗ್ಗಿ ಅನೇಕ ಪ್ರದೇಶಗಳು ಅವರ ಕೈಬಿಟ್ಟುಹೋಗಿ ವೈನಾಡ್ ಎಂಬ ಚಿಕ್ಕ ರಾಜ್ಯ ಮಾತ್ರ ಉಳಿಯಿತು.  ಕ್ವಿಲಾನ್ ಅದರ ರಾಜಧಾನಿಯಾಯಿತು.  ಇಲ್ಲಿ ಆಳಿದ ಪ್ರಥಮ ಪ್ರಭು ಅಯ್ಯನ್ ಅಟಿಕಲ್ ತಿರುವೆಟಿಕಲ್, ವೈನಾಡಿನ ಸ್ವಾತಂತ್ರ್ಯವನ್ನು ಸಂರಕ್ಷಿಸಿದ ದೊರೆಗಳಲ್ಲಿ ಮುಖ್ಯನಾಗಿದ್ದ ಉದಯ ಮಾರ್ತಾಂಡವರ್ಮನ ಕಾಲದಲ್ಲಿ ಮಲಬಾರ್ ಶಕೆ ಪ್ರಾರಂಭವಾಯಿತೆಂಬುದಾಗಿ ಹೇಳಲಾಗಿದೆ.  ಅವನು ಕ್ವಿಲಾನಿನಲ್ಲಿ ಆ ಕಾಲದ ಪ್ರಮುಖ ಖಗೋಳಶಾಸ್ತ್ರಜ್ಞರ ಗೋಷ್ಠಿಯನ್ನು ಏರ್ಪಡಿಸಿದ್ದನೆಂದೂ ಅಲ್ಲಿ ತೀವ್ರವಾದ ಚರ್ಚೆಗಳು ನಡೆದ ಅನಂತರ ನೂತನ ಶಕೆಯೊಂದನ್ನು ಆರಂಬಿಸಲಾಯಿತೆಂದೂ ಹೇಳಲಾಗುತ್ತದೆ. 

ತಿರುವಾಂಕೂರಿನ ಮಧ್ಯಕಾಲೀನ ಇತಿಹಾಸದಲ್ಲಿ ರವಿವರ್ಮನ ಕಾಲ ಅತ್ಯಂತ ಉಜ್ಜ್ವಲವಾಗಿತ್ತು.  ದಕ್ಷಿಣ ಭಾರತದಲ್ಲಿ ತಿರುವಾಂಕೂರಿನ ಪ್ರಾಬಲ್ಯವನ್ನು ಹರಡಿದ ಕೀರ್ತಿ ಅವನಿಗೆ ಸಲ್ಲುತ್ತದೆ.  ಅವನು ಪಾಂಡ್ಯ ದೊರೆ ವಿಕ್ರಮ ಪಾಂಡ್ಯವನ್ನು ಸೋಲಿಸಿ ಅವನ ಪುತ್ರಿಯನ್ನು ವಿವಾಹವಾದ; ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸಿದ; ಸಹ್ಯಾದ್ರಿ ಪರ್ವತಶ್ರೇಣಿಯನ್ನು ಪುನಃ ದಾಟಿ ಉತ್ತರದಲ್ಲಿ ನೆಲ್ಲೂರಿನವರೆಗೆ ಹರಡಿದ್ದ ಪ್ರದೇಶಗಳನ್ನು ವಶಪಡಿಸಿಕೊಂಡು, ಕಾಂಚೀಪುರದಲ್ಲಿ 1313ರಲ್ಲಿ ಪಟ್ಟಾಭಿಷಿಕ್ತನಾದ; ಪುನಃ ಶ್ರೀರಂಗ ಮತ್ತು ತಿರುಪತಿಯಲ್ಲಿ ತನ್ನ ಪಟ್ಟಾಭಿಷೇಕದ ಸಮಾರಂಭ ನಡೆಸಿದ.  ಚೇರ, ಪಾಂಡ್ಯ ಹಾಗೂ ಚೋಳ ರಾಜ್ಯಗಳ ಪ್ರದೇಶಗಳೂ ತಿರುವಾಂಕೂರಿನ ಅಧಿಕಾರಕ್ಕೆ ಒಳಗಾಗಿದ್ದುದನ್ನು ದೃಢಪಡಿಸಿದ.  ತಾನು ಸಾರ್ವಭೌಮ ಎಂಬುದನ್ನು ಎಲ್ಲರಿಗೂ ಸಾರಲು ರಾಜಾಧಿರಾಜ ಪರಮೇಶ್ವರ ಎಂಬ ಬಿರುದನ್ನು ಧರಿಸಿದ.  ನಿಷ್ಠಾವಂತ ಹಿಂದುವೂ ಉದ್ದಾಮ ಸಂಸ್ಕøತ ಪಂಡಿತನೂ ಆಗಿದ್ದ ಅವನು ಮುಸ್ಲಿಮರ ದಾಳಿಗೆ ತುತ್ತಾಗಿದ್ದ ಅನೇಕ ದೇವಾಲಯಗಳ ಜೀರ್ಣೋದ್ಧಾರ ಮಾಡಿಸಿದ; ಅನೇಕ ವಿದ್ವಾಂಸರಿಗೆ ಆಶ್ರಯದಾತನಾಗಿದ್ದ ಮತ್ತು ಸಂಸ್ಕøತದಲ್ಲಿ ಪ್ರದ್ಯುಮ್ನಾಭ್ಯುದಯಮ್ ಎಂಬ ಕೃತಿಯನ್ನು ರಚಿಸಿದ.

ರವಿವರ್ಮ ತೀರಿಕೊಂಡ ಮೇಲೆ ತಿರುವಾಂಕೂರು ವಾರಂಗಲ್ಲಿನ ಕಾಕತೀಯರು ಹಾಗೂ ಪಾಂಡ್ಯರ ಆಕ್ರಮಣಕ್ಕೆ ತುತ್ತಾಯಿತು.  ಅನೇಕ ಪ್ರದೇಶಗಳು ಕೈತಪ್ಪಿದುವು.  ರಾಜ ಸಂತತಿಯವರು ನೆಡುಮಂಗಡ, ಕಲಕುಲಂ ಮುಂತಾದ ಭಾಗಗಳಿಗೆ ಹೋಗಿ ನೆಲಸಿದರು.  15-16ನೆಯ ಶತಮಾನಗಳಲ್ಲಿ ಪೋರ್ಚುಗೀಸರು ಈ ರಾಜ್ಯಕ್ಕೆ ಬಂದು ಕ್ವಿಲಾನ್ ಮತ್ತು ಇತರ ಪ್ರಮುಖ ಕೇಂದ್ರಗಳಲ್ಲಿ ಕೋಠಿಗಳನ್ನು ಸ್ಥಾಪಿಸಿದರು.  ಇದೇ ಸಮಯದಲ್ಲಿ ತಿರುವಾಂಕೂರಿನ ದೊರೆಗಳು ವಿಜಯನಗರದ ಅರಸರು ಮತ್ತು ಮದುರೈ ನಾಯಕರ ವಿರುದ್ಧ ಹೋರಾಡಬೇಕಾಯಿತು.  ಅನಂತರ  ಮಾರ್ತಾಂಡವರ್ಮ ಸಿಂಹಾಸನವನ್ನೇರಿದಾಗ ಈ ರಾಜ ಮನೆತನ ಮತ್ತೆ ಅಭ್ಯುದಯದ ದಾರಿ ಹಿಡಿಯಿತು.  ಅವನು ತನ್ನ ರಾಜ್ಯವನ್ನು ತಿರುವನಂತಪುರದಲ್ಲಿರುವ ರಕ್ಷಕ ದೇವರು ಶ್ರೀ ಪದ್ಮನಾಭನಿಗೆ ಅರ್ಪಿಸಿ ತಾನು  ಪದ್ಮನಾಭದಾಸನೆಂಬುದಾಗಿ ಹೇಳಿಕೊಂಡ. 

ಮಾರ್ತಾಂಡವರ್ಮ ಆಧುನಿಕ ತಿರುವಾಂಕೂರಿನ ಸ್ಥಾಪಕನಾದರೆ, ಅದನ್ನು ಕಟ್ಟಿ ಬೆಳೆಸಿದ ಕೀರ್ತಿ ಅವನ ಉತ್ತರಾಧಿಕಾರಿ ರಾಮವರ್ಮ ಕಾರ್ತಿಕ ತಿರುನಾಳ್ ದೊರೆಗೆ (ಮಲಬಾರ್ ಶಕೆ 933-973) ಸಲ್ಲುತ್ತದೆ.  ಮೈಸೂರಿನ ಪ್ರಭು, ಕರ್ಣಾಟಕದ ನವಾಬ, ಕಲ್ಲಿಕೋಟೆಯ ಜûಮೋರಿನ್ ಮತ್ತು ತಿರುನೆಲ್ವೇಲಿಯ ಪಾಳೆಯಗಾರರ ಆಕ್ರಮಣವನ್ನು ಅವನು ಯಶಸ್ವಿಯಾಗಿ ತಡೆಗಟ್ಟಿದನಲ್ಲದೆ, ನೂತನ ಪ್ರದೇಶಗಳನ್ನು ಗೆದ್ದು ತನ್ನ ಅಧಿಕಾರವನ್ನು ಬಲಪಡಿಸಿಕೊಂಡ, ಆಡಳಿತವನ್ನು ಸುವ್ಯವಸ್ಥೆಗೆ ಒಳಪಡಿಸಿದ. ಅವನು ಭಾರತದಲ್ಲಿ ಪ್ರಬಲರಾಗುತ್ತಿದ್ದ ಬ್ರಿಟಿಷರೊಂದಿಗೆ ಮೈತ್ರಿ ಸಾಧಿಸಿದ.  ಬ್ರಿಟಿಷರ ಪ್ರಭಾವ ಬೆಳೆಯಿತು.  ಅನಂತರ ಬಂದ ಬಾಲರಾಮವರ್ಮ ಅದಕ್ಷ ದೊರೆ. ಅವನ ತರುವಾಯು ಸಿಂಹಾಸನವೇರಿದ ಸ್ವಾತಿ ತಿರುನಾಳ್ (ಮಲಬಾರ್ ಶಕೆ 1004-1022)ದೂರದರ್ಶಿ, ಪ್ರತಿಭಾವಂಥ, ಬದಲಾಗುತ್ತಿದ್ದ ಕಾಲಕ್ಕೆ ಅನುಗುಣವಾಗಿದ್ದ ನೂತನ ಪ್ರಗತಿಪರ ಸಂಸ್ಥೆಗಳನ್ನು ಕಟ್ಟಿದ.  ಆದರೆ ಮುಪ್ಪಿನಲ್ಲಿ ಈ ದೊರೆಗೂ ಅಲ್ಲಿಯ ಬ್ರಿಟಿಷ್ ರೆಸಿಡೆಂಟನಿಗೂ ಭಿನ್ನಾಭಿಪ್ರಾಯ ಉಂಟಾದ್ದರಿಂದ ತಿರುನಾಳ್ ದೊರೆಗೆ ರಾಜ್ಯಕಾರ್ಯಗಳಿಗಿಂತ ಆಧ್ಯಾತ್ಮಿಕ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಬೆಳೆಯಿತು.  ಸ್ವಾತಿ ತಿರುನಾಳ್ ಮಹಾಪಂಡಿತ, ಉದ್ದಾಮ ಕವಿ, ಘನ ಸಂಗೀತಗಾರ, ಅನೇಕ ಸಂಗೀತ ಕೃತಿಗಳನ್ನೂ ಗ್ರಂಥಗಳನ್ನೂ ರಚಿಸಿದ.

ಅನಂತರ ಬಂದ ರಾಮವರ್ಮ ಅಮಿಲಿಯಂ ತಿರುನಾಳ್ ದೊರೆಯ ಆಳ್ವಿಕೆಯ ಕಾಲದಲ್ಲಿ ಶೀಘ್ರವಾಗಿ ಅನೇಕ ಸುಧಾರಣಾ ಕಾರ್ಯಗಳನ್ನು ಕೈಗೊಳ್ಳಲಾಯಿತು ಮತ್ತು ಬ್ರಿಟಿಷ್ ಸಂಸತ್ತು ತಿರುವಾಂಕೂರಿನ್ನು ಆದರ್ಶ ರಾಜ್ಯ ಎಂಬುದಾಗಿ ವರ್ಣಿಸಿತು.  ಮುಂದೆ ಬಂದ ವಿಶಾಖಂ ತಿರುನಾಳ್ ಅನೇಕ ಆಡಳಿತ ಸಂಧಾರಣೆಗಳನ್ನೂ ಯೋಜಿಸಿ ಜಾರಿಗೆ ತರುವ ಕನಸನ್ನು ಕಂಡ.  ಆದರೆ ಸಿಂಹಾಸನವೇರಿದ ಐದು ವರ್ಷಗಳಲ್ಲಿ ತೀರಿಕೊಂಡ. ಅವನ ಬಳಿಕ ರಾಜ್ಯವಾಳಿದ ಶ್ರೀಮೂಲಂ ತಿರುನಾಳ್ ದೊರೆಯ ಆಳ್ವಿಕೆಯಲ್ಲಿ ತಿರುವಾಂಕೂರು ಬಹಳ ಪ್ರಗತಿ ಸಾಧಿಸಿತು.  ಅವನು 1924ರಲ್ಲಿ ಕಾಲವಾದ.  ಶ್ರೀಚಿತ್ರ ತಿರುನಾಳ್ ರಾಜಕುವರನನ್ನು ಅದೇ ವರ್ಷ ಸೆಷ್ಟೆಂಬರ್ ತಿಂಗಳ ಒಂದನೆಯ ತಾರೀಕಿನಂದು ಬ್ರಿಟಿಷ್ ಸರ್ಕಾರ ಉತ್ತರಾಧಿಕಾರಿ ಎಂಬುದಾಗಿ ಒಪ್ಪಿಕೊಂಡಿತು.  ಆದರೆ ರಾಜಪುತ್ರ ಅಪ್ರಾಪ್ತವಯಸ್ಕನಾಗಿದ್ದುದರಿಂದ ಹಿರಿಯ ರಾಣಿ ಸೇತು ಲಕ್ಷ್ಮೀಬಾಯಿ ರಾಜ ಪ್ರತಿನಿಧಿಯಾಗಿ ನೇಮಕವಾದಳು.  ರಾಜಕುಮಾರ ಚಿಕ್ಕ ವಯಸ್ಸಿನಲ್ಲೇ ಮಲಯಾಳಂ, ಸಂಸ್ಕøತ ಮತ್ತು ಇಂಗ್ಲಿಷ್ ಭಾಷೆ ಕಲಿತ.  ಅವನು ಉತ್ತಮ ಆಟಗಾರನಾಗಿದ್ದ.  ಅವನ ಕಾಲದಲ್ಲಿ ಸಂಸ್ಥಾನದಲ್ಲಿ ಅನೇಕ ಸುಧಾರಣೆಗಳು ಜಾರಿಗೆ ಬಂದುವು.  1947ರಲ್ಲಿ ಭಾರತ ಸ್ವತಂತ್ರವಾಯಿತು.  ಸ್ವಲ್ಪ ಕಾಲ ಸ್ವತಂತ್ರ ಧೋರಣೆ ಅನುಸರಿಸಿದ ತಿರುವಾಂಕೂರು ಸಂಸ್ಥಾನ ಕೊನೆಗೆ ಭಾರತ ಒಕ್ಕೂಟದಲ್ಲಿ ಸೇರಿತು.  1949ರ ಜುಲೈ 1 ರಂದು ತಿರುವಾಂಕೂರು-ಕೊಚ್ಚಿ ರಾಜ್ಯ ಏರ್ಪಟ್ಟಿತು.  1956ರಲ್ಲಿ ರಾಜ್ಯ ಪುನರ್ವಿಂಗಡಣೆಯಾದಾಗ ಇದು ಕೇರಳ ರಾಜ್ಯದಲ್ಲಿ ಸೇರಿತು.  ಇದರ ದಕ್ಷಿಣದ ತಮಿಳು ಪ್ರದೇಶಗಳನ್ನು ತಮಿಳುನಾಡಿಗೆ ವರ್ಗಮಾಡಲಾಯಿತು.

ಉತ್ತಮ ರಾಜಪರಂಪರೆಯ ಭವ್ಯ ಆಳ್ವಿಕೆಯ ಸವಿಯನ್ನುಂಡ ತಿರುವಾಂಕೂರು ಸಾಂಸ್ಕøತಿಕ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಗಗಳನ್ನು ನೀಡಿದೆ.  ಸುಸಂಸ್ಕøತರೂ, ಉತ್ತಮ ಕಲಾಭಿರುಚಿಯುಳ್ಳವರೂ ಸ್ವತಃ ಕಲಾಭಿಜ್ಞರೂ ಆಗಿದ್ದ ದೊರೆಗಳು ನೀಡಿದ ನಿರಂತರ ಪ್ರೋತ್ಸಾಹದಿಂದ ಎಲ್ಲ ಕಲೆಗಳೂ ವಿಕಾಸಗೊಂಡುವು.  ಸುಂದರ ಶಿಲಾ ಶಿಲ್ಪಕೃತಿಗಳು, ಕಂಚಿನ ಪ್ರತಿಮೆಗಳು, ಮರದ ಕೆತ್ತನೆ ಕೆಲಸಗಳು, ದಕ್ಷಿಣ ತಿರುವಾಂಕೂರಿನ ಗವಿ ದೇವಾಲಯಗಳ ಮತ್ತು ಪದ್ಮನಾಭಪುರದ ಮೂರಂ ಉಪ್ಪರಿಗೆಗಳಿಂದ ಕೂಡಿರುವ ಅರಮನೆಯ ಮೇಲಿನ ಭಾಗದ ಗೋಡೆಗಳನ್ನು ಅಲಂಕರಿಸಿರುವ, ಆಗತಾನೇ ರಚಿಸಿದಂತಿರುವ ವರ್ಣಚಿತ್ರಗಳು, ಶುಚೀಂದ್ರಮ್‍ನ ದೇವಸ್ಥಾನದ ಚಾವಣಿ ಹಾಗೂ ಗೋಡೆಗಳ ಮೇಲೆ ಕಂಗೊಳಿಸುತ್ತಿರುವ ಭಿತ್ತಿಚಿತ್ರಗಳು, ಚಿತ್ತಾಕರ್ಷಕವಾಗಿರುವ ದಂತದ ಕೆಲಸಗಳು ಮುಂತಾದವು ಕಲಾಕ್ಷೇತ್ರದಲ್ಲಿ ತಿರುವಾಂಕೂರಿನ ಕಲೆಗಾರರು ಅತ್ಯದ್ಬುತ ಸಾಧನೆಗಳನ್ನು ಗಳಿಸಿದ್ದರು ಎಂಬುದಕ್ಕೆ ಸಾಕ್ಷಿಗಳಾಗಿವೆ.  ಉತ್ತಮ ಸಂಗೀತಗಾರನಾಗಿದ್ದ ಅಮಿಲಿಯಂ ತಿರುನಾಳ್ ಕಟ್ಟಿಸಿದ ರಂಗವಿಲಾಸ್ ಅರಮನೆ, ಮಹಾರಾಣಿ ಸೇತು ಪಾರ್ವತಿಬಾಯಿಯ ಪ್ರಯತ್ನಗಳ ಫಲವಾಗಿ ರಂಗವಿಲಾಸ್ ಕಲಾಕೇಂದ್ರವಾಗಿ ಮಾರ್ಪಟ್ಟಿತು.  ಈ ಕೇಂದ್ರದಲ್ಲಿ ಕಥಕ್ಕಳಿಯ ವಿವಿಧ ನಾಟ್ಯಭಂಗಿಗಳನ್ನು ಪ್ರದರ್ಶಿಸುತ್ತಿರುವ ಮಾನವ ಪ್ರತಿಮೆಗಳು, ಸುಂದರವಾಗಿರುವ ಕಂಚಿನ ದೀಪಗಳು, ಪ್ರಾಚೀನ ಚೀನದ ಬೆಲೆಬಾಳುವ ಕಲಾಕೃತಿಗಳು, ಪುರಾತನ ದಂತದ ವಸ್ತುಗಳು, ದೊರೆಗಳ ಭಾವಚಿತ್ರಗಳು, ಉಡುಪು ಹಾಗೂ ಶಸ್ತ್ರಗಳು, ಸ್ವಾತಿ ತಿರುನಾಳ್ ಮಹಾರಾಜ ಉಪಯೋಗಿಸುತ್ತಿದ್ದ ಸ್ವರ್ ಬಟ್ ಎಂಬ ಅಪೂರ್ವ ವಾದ್ಯ.  ಅತ್ಯತ್ತಮ ವಸ್ತುಗಳನ್ನು ಸಂಗ್ರಹಿಸಿಡುವುದಕ್ಕಾಗಿ ಬಳಸುತ್ತಿದ್ದ ಕೆತ್ತನೆ ಕೆಲಸಗಳಿಂದ ಕೂಡಿದ ಸುಂದರವಾದ ಕಂಚಿನ ಪೆಟ್ಟಿಗೆ ಮುಂತಾದ ಅನೇಕ ಕಲಾಕೃತಿಗಳು ಸಂಗ್ರಹವಾಗಿವೆ.  ಚಿತ್ರಕಲಾಕೇಂದ್ರವಾದ ಶ್ರೀಚಿತ್ರಾಲಯದಲ್ಲಿ ಅನೇಕ ಕಲಾವಿದರ ಚಿತ್ರ ಕಲಾಕೃತಿಗಳೂ ಹಿಂದೂ ಬೌದ್ಧ, ಹಾಗೂ ಅಜಂತ ಭಿತ್ತಿಚಿತ್ರಗಳೂ ರಜಪೂತ, ಮೊಗಲ್ ಮತ್ತು ಪರ್ಷಿಯನ್ ಚಿತ್ರ ಕೃತಿಗಳೂ ಇವೆ.
ಸಂಗೀತ ಕ್ಷೇತ್ರಕ್ಕೆ ತಿರುವಾಂಕೂರು ರಾಜಮನೆತನದವರು ನೀಡಿರುವ ಕಾಣಿಕೆ ಬಲು ದೊಡ್ಡದು.  ಬಹುತೇಕ ಎಲ್ಲ ರಾಜರೂ ಶ್ರೇಷ್ಠ ಸಂಗೀತಗಾರರೂ ಸಂಗೀತ ಪ್ರೇಮಿಗಳೂ ಆಗಿದ್ದರು.  ಸಂಗೀತದ ವಿಶಿಷ್ಟ ರಚನೆಯಾಗಿರುವ ಪದಂ ಮತ್ತು ಕಥಕ್ಕಳಿಯ ಸೃಷ್ಟಿಕರ್ತ. ರಾಜಾ ಕೇರಳವರ್ಮಕಾರ್ತಿಕ ತಿರುನಾಳ್ ಉತ್ತಮ ದರ್ಜೆಯ ಸಂಗೀತಗಾರ, ವಿಮರ್ಶಕ, ಅಶ್ವಿನಿ ತಿರುನಾಳ್ ಸಂಗೀತಗಾರ, ಸ್ವಾತಿ ತಿರುನಾಳ್ ಆಳ್ವಿಕೆಯ ಕಾಲ ಸಂಗೀತದ ಮಹೋತ್ಕರ್ಷದ ಕಾಲವಾಗಿತ್ತು.  ಸ್ವಾತಿ ತಿರುನಾಳ್ ಸಂಸ್ಕøತ , ಮಲಯಾಳಂ, ತಮಿಳು, ತೆಲುಗು, ಉರ್ದು, ಕನ್ನಡ, ಮರಾಠಿ ಹಾಗೂ ಹಿಂದಿ ಭಾಷೆಗಳಲ್ಲಿ ಅನೇಕ ಅಪೂರ್ವ ಕೃತಿಗಳನ್ನು ರಚಿಸಿದ್ದಾನೆ.  ಅವನ್ನು ಇಂದೂ ಸಂಗೀತಗಾರರು ಭಕ್ತಿಯಿಂದ ಹಾಡುತ್ತಾರೆ.  ಅವನು ರಚಿಸಿರುವ ತಾನ ಹಾಗೂ ಚೌಕ ವರ್ಣಗಳು, ಪದಂ, ನವರಾತ್ರಿ ಕೀರ್ತನೆಗಳು, ತಿಲ್ಲಾನ, ಹರಿಕಥೆ ಇತ್ಯಾದಿಗಳು ಬಹು ಸೊಗಸಾಗಿವೆ.  ಇವು ಅವನ ಆಳವಾದ ಪಾಂಡಿತ್ಯ, ಭಕ್ತಿಭಾವ ಹಾಗೂ ಧರ್ಮಪರಾಯಣತೆಗೆ ಸಾಕ್ಷೀಭೂತವಾಗಿವೆ. ರಾಜಾ ಕೇರಳ ವರ್ಮ ಮತ್ತು ಹಿರಿಯ ರಾಣಿ ಲಕ್ಷ್ಮೀಬಾಯಿ ಉತ್ತಮ ವೈಣಿಕರಾಗಿದ್ದರು.  ಈ ದೊರೆಗಳು ದೊಡ್ಡ ಸಂಗೀತಗಾರರಿಗೆ ಆಶ್ರಯದಾತರೂ ಆಗಿದ್ದರು.  ಮಹಾ ವೈದ್ಯನಾಥ ಭಾಗವತರ್, ರಾಘವ ಅಯ್ಯರ್, ಮಹಾದೇವ ಅಯ್ಯರ್ ಮುಂತಾದವರು ಅಮಿಲಿಯಂ ತಿರುನಾಳ್ ದೊರೆಯ ಆಳ್ವಿಕೆಗೆ  ಮಕುಟಪ್ರಾಯರಾಗಿದ್ದರು.  ಸ್ವಾತಿ ತಿರುನಾಳ್ ಬರೆದಿರುವ ಶ್ರೀ ಪದ್ಮನಾಭ ಶತಕ, ಉತ್ಸವ ಪ್ರಬಂಧಂ, ಭಕ್ತಿಮಂಜರಿ, ಅಜಾಮಿಳೋಪಾಖ್ಯಾನ, ಕುಚೇಲೋಪಾಖ್ಯಾನ ಹಾಗೂ ಸಂಗೀತ ಕೃತಿ ಮತ್ತು ಕಾರ್ತಿಕ ತಿರುನಾಳ್ ಮಹಾರಾಜ ವಿರಚಿತ ಬಾಲರಾಮ ಭಾರತ ಮುಂತಾದವು ಈ ರಾಜ ಪರಂಪರೆಯವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಶ್ರೇಷ್ಠ ಕೊಡುಗೆಗಳು.

ತಿರುವಾಂಕೂರಿನ ಇನ್ನೊಂದು ಸಾಂಸ್ಕøತಿಕ ವೈಶಿಷ್ಟ್ಯವೆಂದರೆ ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಮುಖ್ಯವಾಗಿರುವ ನವರಾತ್ರಿ ಹಬ್ಬ.  ಇದು ಈ ರಾಜ ಮನೆತನದ ಇತಿಹಾಸದಷ್ಟೇ ಪ್ರಾಚೀನವಾದ ಹಬ್ಬವಾಗಿದೆ.  ಪದ್ಮನಾಭಪುರದ ಪುರಾತನ ಅರಮನೆಯಲ್ಲಿ ತೆವರಕ್ಕೆಟ್ಟು. (ಆರಾಧನಾ ಕಟ್ಟಡ) ಎಂದು ಕರೆಯಲಾದ, ಸರಸ್ವತಿ ದೇವಿಯ ಆಲಯದ ಮುಂಭಾಗದಲ್ಲಿ ಶಿಲೆಯಲ್ಲಿ ನಿರ್ಮಿಸಲಾದ ನವರಾತ್ರಿ ಮಂಟಪದಲ್ಲಿ ದೊರೆ ಮಾರ್ತಾಂಡವರ್ಮ ನವರಾತ್ರಿ ಹಬ್ಬವನ್ನು ಒಂಬತ್ತು ದಿನಗಳ ಕಾಲ ವಿಧಿವತ್ತಾಗಿ ಆಚರಿಸುತ್ತಿದ್ದ.  ಈ ದಿನಗಳಲ್ಲಿ ಸರಸ್ವತಿ ವಿಗ್ರಹದ ಕಾಲುಗಳೂ ಬಳಿ ಇಟ್ಟಿರುತ್ತಿದ್ದ ತಾಳೆ ಓಲೆಗಳನ್ನೂ ಪಟ್ಟದ ಕತ್ತಿ ಹಾಗೂ ಇತರ ಆಯುಧ ಗಳನ್ನೂ ಅವನು ಪೂಜಿಸುತ್ತಿದ್ದ.  ನಾದಸ್ವರ, ಹಾಡುಗಾರಿಕೆ ಹಾಗೂ ವಾದ್ಯ ಸಂಗೀತ ಕಛೇರಿಗಳನ್ನು ಏರ್ಪಡಿಸಲಾಗುತ್ತಿತ್ತು.  ಸ್ವಾತಿ ತಿರುನಾಳ್ ದೊರೆ ವಿದ್ವತ್ಸಭೆಗಳನ್ನು ಸಹ ಏರ್ಪಡಿಸುತ್ತದ್ದ.  ಸ್ವಾತಿ, ತಿರುನಾಳ್ ಈ ಸಭೆಗಳನ್ನು ಇನ್ನೂ ಹೆಚ್ಚು ಸುವ್ಯವಸ್ಥಿತವಾದ ರೀತಿಯಲ್ಲಿ ನಡೆಸಿ ಅವು ಅತ್ಯಂತ ಜನಪ್ರಿಯವಾಗುವಂತೆ ಮಾಡಿದ.  ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣ ಬಳಸಿದ ರಥದಂಥ ಒಂದು ಅತ್ಯಂತ ಸುಂದರ ರಥವನ್ನು ಮರದಲ್ಲಿ ಇವರ ಕಾಲದಲ್ಲಿ ನಿರ್ಮಿಸಲಾಯಿತು.  ವಿಜಯದಶಮಿಯಂದು ದೊರೆ ಈ ರಥದಲ್ಲಿ ಕುಳಿತು ಮೆರವಣಿಗೆಯಲ್ಲಿ ವಿಲ್ಲೂಕಿರಿ ಗ್ರಾಮಕ್ಕೆ ಹೋಗಿ ಅಲ್ಲಿ ಇಡಲಾಗಿದ್ದ ಎಳೆಯ ತೆಂಗಿನಕಾಯನ್ನು ತನ್ನ ಭಲ್ಲೆಯಿಂದ ಕತ್ತರಿಸಿ ಸರಸ್ವತಿದೇವಿಯನ್ನು ಪೂಜಿಸಿ ಪುನಃ ಮೆರವಣಿಗೆಯಲ್ಲಿ ಹಿಂದಿರುಗುತ್ತಿದ್ದ.  ಮೆರವಣಿಗೆ ತುಂಬ ಆಕರ್ಷಕವಾಗಿರುತ್ತಿತ್ತು.  ತಿರುವನಂತಪುರ ರಾಜಧಾನಿಯಾದ ಮೇಲೆ ದೊರೆಗಳು ನವರಾತ್ರಿ ಉತ್ಸವವನ್ನು ಅಲ್ಲೇ ಆಚರಿಸಿಲಾರಂಭಿಸಿದರು.

ಹೀಗೆ ದೀರ್ಘ ರಾಜಪರಂಪರೆಯ ಆಳ್ವಿಕೆಗೆ ಒಳಪಟ್ಟು ತಿರುವಾಂಕೂರು ಭಾರತದ ಪ್ರಮುಖ ದೇಶಿಯ ಸಂಸ್ಥಾನಗಳಲ್ಲಿ ಒಂದಾಗಿತ್ತು.								(ಎಂ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ